NATIONAL NEWS

"ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಒಲಿದ ಪ್ರತಿಷ್ಠಿತ TNIT ಮೀಡಿಯಾ ಅವಾರ್ಡ್" "'ಶಿವಮೊಗ್ಗ ಜನ್ಮಭೂಮಿಯಾದರೆ, ಹಾಸನ ನನ್ನ ಕರ್ಮಭೂಮಿ': ಭಾವುಕರಾದ ಪತ್ರಕರ್ತ ಕಿರಣ್"'

By VIJAY KUMAR H L • 2026-10-28 06:24 • 4 views   Share WhatsApp Share Facebook Share X
"ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಒಲಿದ ಪ್ರತಿಷ್ಠಿತ TNIT ಮೀಡಿಯಾ ಅವಾರ್ಡ್"  "'ಶಿವಮೊಗ್ಗ ಜನ್ಮಭೂಮಿಯಾದರೆ, ಹಾಸನ ನನ್ನ ಕರ್ಮಭೂಮಿ': ಭಾವುಕರಾದ ಪತ್ರಕರ್ತ ಕಿರಣ್"'

'ಶಿವಮೊಗ್ಗ ನನ್ನ ಜನ್ಮಭೂಮಿ, ಹಾಸನ ನನ್ನ ಕರ್ಮಭೂಮಿ': ಭಾವುಕರಾದ ಪತ್ರಕರ್ತ ಕಿರಣ್

ಕನ್ನಡ ವಿದ್ಯುನ್ಮಾನ ಪತ್ರಿಕೋದ್ಯಮದಲ್ಲಿ ವಸ್ತುನಿಷ್ಠ ಹಾಗೂ ಸ್ಪಂದನಶೀಲ ವರದಿಗಾರಿಕೆಗೆ ಹೆಸರುವಾಸಿಯಾಗಿರುವ ನ್ಯೂಸ್ ಫಸ್ಟ್ ವಾಹಿನಿಯ ಹಾಸನ ಜಿಲ್ಲಾ ವರದಿಗಾರ ಕಿರಣ್ ವಿ. ಅವರಿಗೆ ಪ್ರತಿಷ್ಠಿತ ಟಿಎನ್‌ಐಟಿ ಸೌತ್ ಇಂಡಿಯಾ ಮೀಡಿಯಾ ಪ್ರಶಸ್ತಿ ಲಭಿಸಿದೆ. ಈ ಸಾಧನೆಯನ್ನು ಮಂಗಳವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಕಿರಣ್ ವಿ. ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ದಕ್ಷಿಣ ಭಾರತದ ಐದು ರಾಜ್ಯಗಳ ವ್ಯಾಪ್ತಿಯಲ್ಲಿ ವೃತ್ತಿಪರ ವರದಿಗಾರಿಕೆಗೆ ನೀಡಲಾಗುವ ಈ ಪ್ರಶಸ್ತಿ ಹಾಸನ ಜಿಲ್ಲೆಯ ಮಾಧ್ಯಮ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕಿರಣ್ ಅವರ ಸಾಧನೆಯನ್ನು ಅಭಿನಂದಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ, ಕಿರಣ್ ಅವರ ವರದಿಗಾರಿಕೆ ಆಕ್ರಮಣಕಾರಿ ಶೈಲಿಯದ್ದಾಗಿದ್ದರೂ ಅವರು ಸೂಕ್ಷ್ಮ ಮನಸ್ಸಿನ ವ್ಯಕ್ತಿ ಎಂದು ಹೇಳಿದರು. ಮಾಧ್ಯಮ ಕ್ಷೇತ್ರದಲ್ಲಿ ಸ್ವಪ್ರಚಾರಕ್ಕೆ ಆದ್ಯತೆ ನೀಡದೆ, ಹಿರಿಯರು ಮತ್ತು ಕಿರಿಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವುದು ಅವರ ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಮಾಜಿ ಅಧ್ಯಕ್ಷ ಬಾಳುಗೋಪಾಲ್ ಮಾತನಾಡಿ, ಪ್ರಶಸ್ತಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು. ರಾಜಕೀಯ ಒತ್ತಡಗಳಿಗೆ ಮಣಿಯದೆ ಕಿರಣ್ ನಡೆಸಿದ ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ದಕ್ಷಿಣ ಭಾರತ ಮಟ್ಟದ ಗೌರವ ದೊರೆತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಕೆ.ಬಿ. ಮಂಜುನಾಥ್ (ಟಿವಿ-9) ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಮೌಲ್ಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವ ಕಿರಣ್ ಅವರ ಸಮಾಜಮುಖಿ ಸ್ಪಂದನೆ ಇತರ ಪತ್ರಕರ್ತರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಕಿರಣ್ ವಿ., ತಾವು ಕಳೆದ 17 ವರ್ಷಗಳಿಂದ ಹಾಸನದಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಶಿವಮೊಗ್ಗ ತಮ್ಮ ಜನ್ಮಭೂಮಿಯಾದರೆ, ಹಾಸನ ತಮ್ಮ ಕರ್ಮಭೂಮಿ ಎಂದು ಬಣ್ಣಿಸಿದ ಅವರು, ಆರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಸಂಕೋಚವಾಗಿದ್ದರೂ ಹಿರಿಯರ ಪ್ರೀತಿ ಮತ್ತು ಒತ್ತಾಯಕ್ಕೆ ಮಣಿದು ಸನ್ಮಾನ ಸ್ವೀಕರಿಸಿದ್ದಾಗಿ ಹೇಳಿದರು. ಹಾಸನ ಜಿಲ್ಲೆಯ ಜನರ ಪ್ರೀತಿ ಹಾಗೂ ಸಹೋದ್ಯೋಗಿಗಳ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎನ್. ನಂಜುಂಡೇಗೌಡ, ಖಜಾಂಚಿ ಪ್ರಕಾಶ್ ಬೆಳವಾಡಿ (ಟಿವಿ-5), ಕಾರ್ಯದರ್ಶಿ ಕೆ.ಎಂ. ಹರೀಶ್ (ಸುವರ್ಣ ನ್ಯೂಸ್), ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್ ಸೇರಿದಂತೆ ಪತ್ರಕರ್ತರಾದ ಮಲ್ಲಿಕಾರ್ಜುನ ಕೊಚ್ಚರಗಿ ಮತ್ತು ಕಿರಣ್ ರಾವ್ ಸಿ.ಎಸ್. ಉಪಸ್ಥಿತರಿದ್ದರು. ಕೆ.ಜಿ. ಸುರೇಶ್ ಸ್ವಾಗತಿಸಿದರು. ಕೆ.ಎಂ. ಹರೀಶ್ ವಂದಿಸಿದರು.

#Thenewindiantimes#Kiran V#NewsFirstKannada
VIJAY KUMAR H L 0 followers