ಕೈಗಾರಿಕಾ ವಿಷತ್ಯಾಜ್ಯ ತಡೆಗೆ ಆಗ್ರಹ: ಮಂಗಳವಾರ ಬೀದರ್-ಕಲಬುರಗಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಗೆ ನಿರ್ಧಾರ
ಕೈಗಾರಿಕಾ ವಿಷತ್ಯಾಜ್ಯ ತಡೆಗೆ ಆಗ್ರಹ: ಮಂಗಳವಾರ ಬೀದರ್-ಕಲಬುರಗಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಗೆ ನಿರ್ಧಾರ
ಹುಮನಾಬಾದ್: ತಾಲೂಕಿನ ಕೈಗಾರಿಕಾ ಪ್ರದೇಶಗಳಿಂದ ಮಳೆ ನೀರಿನೊಂದಿಗೆ ಹರಿದುಬಿಡಲಾಗುತ್ತಿರುವ ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ತಡೆಗಟ್ಟುವಂತೆ ಆಗ್ರಹಿಸಿ, ಮಾಣಿಕನಗರದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಮಂಗಳವಾರ ಬೀದರ್-ಕಲಬುರಗಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ರವಿವಾರ ತಾಲೂಕಿನ ಮಾಣಿಕನಗರದಲ್ಲಿ ಮಾಣಿಕಪ್ರಭು ಸಂಸ್ಥಾನದ ಆನಂದರಾಜ ಅವರ ನೇತೃತ್ವದಲ್ಲಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾರ್ವಜನಿಕರು ಹಾಗೂ ರಾಜಕಾರಣಿಗಳ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕೈಗಾರಿಕಾ ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಸಭೆಯ ಆರಂಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಹೋರಾಟದ ಸ್ವರೂಪ ಹಾಗೂ ಜನರ ಅಭಿಪ್ರಾಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ಆನಂದರಾಜ ಅವರು, ಬಳಿಕ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು.
ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ: ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಾಜಶೇಖರ ಪಾಟೀಲ, ನಿಯಮ ಮೀರಿ ವಿಷತ್ಯಾಜ್ಯ ಹೊರಬಿಡುತ್ತಿರುವ ಕಾರ್ಖಾನೆಗಳ ವಿರುದ್ಧದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಕಾನೂನು ಪಾಲಿಸದೆ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವ ಕಾರ್ಖಾನೆಗಳ ಅಗತ್ಯ ನಮಗಿಲ್ಲ. ಮೊದಲು ಜನರ ಆರೋಗ್ಯ ಮುಖ್ಯ. ಆರೋಗ್ಯವೇ ಹಾಳಾದರೆ ಉಳಿದದ್ದೆಲ್ಲವೂ ಶೂನ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹುಮನಾಬಾದ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮತ್ತೊಮ್ಮೆ ಸದನದಲ್ಲಿ ಧ್ವನಿ ಎತ್ತುವೆ: ಶಾಸಕ ಡಾ. ಸಿದ್ದು ಪಾಟೀಲ ಮಾತನಾಡಿ, ಮಳೆ ನೀರಿನೊಂದಿಗೆ ರಾಸಾಯನಿಕ ಕಾರ್ಖಾನೆಗಳು ಹಾಗೂ ಟೈರ್ ಪೈರೋಲಿಸಿಸ್ ಘಟಕಗಳು ಅಪಾಯಕಾರಿ ವಿಷತ್ಯಾಜ್ಯವನ್ನು ಹಳ್ಳಗಳಿಗೆ ಹರಿಸುತ್ತಿರುವುದು ಜನಜೀವನಕ್ಕೆ ಭಾರಿ ಆತಂಕ ತಂದೊಡ್ಡಿದೆ ಎಂದು ಹೇಳಿದರು. ಇದು ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳ ಜೀವಕ್ಕೂ ಕಂಟಕವಾಗಿದೆ. ಈ ಗಂಭೀರ ವಿಷಯದ ಕುರಿತು ಮುಂಬರುವ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿ, ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಜೀವಕ್ಕೆ ಆಪತ್ತು ತರುವ ಕಾರ್ಖಾನೆಗಳ ವಿರುದ್ಧದ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಪರಿಹಾರ ಸಿಗುವವರೆಗೆ ಹೋರಾಟ: ಮಾಣಿಕಪ್ರಭು ಸಂಸ್ಥಾನದ ಆನಂದರಾಜ ಅವರು ಮಾತನಾಡಿ, 2017ರಲ್ಲೇ ಬೀದರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೈಗಾರಿಕಾ ತ್ಯಾಜ್ಯ ತಡೆಯುವಂತೆ ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಬೃಹತ್ ಪ್ರಮಾಣದ ರಾಸಾಯನಿಕ ತ್ಯಾಜ್ಯ ಹಳ್ಳ-ಕೊಳ್ಳಗಳಿಗೆ ಹರಿಯುತ್ತಿದೆ ಎಂದು ಆರೋಪಿಸಿದರು.
ಇದರಿಂದ ಈ ಭಾಗದ ಗಾಳಿ, ಭೂಮಿ ಮತ್ತು ಅಂತರ್ಜಲ ಕಲುಷಿತಗೊಂಡಿದೆ. ಸಾರ್ವಜನಿಕರ ಜೀವಕ್ಕೆ ಕಂಟಕ ಎದುರಾಗಿರುವುದರಿಂದ ಎಲ್ಲರ ಸಹಕಾರದೊಂದಿಗೆ ಮಂಗಳವಾರ ಬೃಹತ್ ರಸ್ತೆ ತಡೆ ನಡೆಸಲಾಗುವುದು. ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ, ಚೇತನರಾಜ ಪ್ರಭು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ವೀರಣ್ಣಾ ಪಾಟೀಲ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಮಾಶೆಟ್ಟಿ, ಸಿದ್ದಣ್ಣ ಭೂಶೆಟ್ಟಿ, ವಾಹಿದ್ ಬೇಗ್, ಈಶ್ವರ ಕಲಬುರ್ಗಿ, ಅರವಿಂದ ಭಾಲ್ಕಿಕರ್ ಸೇರಿದಂತೆ ವಿವಿಧ ಗ್ರಾಮಗಳ ಪ್ರಮುಖರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.