ದೇವರ ದರ್ಶನ ಪಡೆದು ಸಂತಸದಿಂದ ಮನೆಗೆ ಮರಳುತ್ತಿದ್ದ ಮೂವರು ಯುವಕರ ಬದುಕು ಹಾಸನ ತಾಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪದ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾಹಿತಿಯ ಪ್ರಕಾರ, ಬೆಂಗಳೂರಿನ ಸುಮಾರು ಹತ್ತು ಮಂದಿ ಸ್ನೇಹಿತರು ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ ಶ್ರೀ. ಮಂಜುನಾಥಸ್ವಾಮಿಯ ದರ್ಶನ ಪಡೆದಿದ್ದರು. ಬಳಿಕ ಬೆಂಗಳೂರಿನತ್ತ ವಾಪಸಾಗುವ ವೇಳೆ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ನಿರ್ಧರಿಸಿ ಅಲ್ಲಿಗೆ ಆಗಮಿಸಿದ್ದರು. ಚರ್ಚ್‌ನ ಸುತ್ತಲಿನ ಹೇಮಾವತಿ ಹಿನ್ನೀರಿನ ಆಕರ್ಷಕ ದೃಶ್ಯವನ್ನು ಕಂಡ ಕೆಲವರು ನೀರಿಗೆ ಇಳಿದು ಈಜಲು ಮುಂದಾಗಿದ್ದರು.
ಈ ವೇಳೆ ಚರಣ್, ಮಿಲನ್ ಹಾಗೂ ಮಣಿಕಂಠ ನೀರಿನ ಆಳವನ್ನು ಅರಿಯದೆ ಹಿನ್ನೀರಿಗೆ ಇಳಿದಿದ್ದು, ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಮುಳುಗಲಾರಂಭಿಸಿದ್ದಾರೆ. ಮೂವರು ಅಪಾಯದಲ್ಲಿರುವುದನ್ನು ಗಮನಿಸಿದ ಉಳಿದ ಸ್ನೇಹಿತರು ರಕ್ಷಿಸಲು ಹರಸಾಹಸಪಟ್ಟರೂ ಸಾಧ್ಯವಾಗದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೂವರೂ ನೀರಿನಲ್ಲಿ ಕಣ್ಮರೆಯಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಮೂವರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಈ ಘಟನೆ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು ಹಾಗೂ ಬಂಧುಗಳು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಒಂದೇ ತಂಡದ ಮೂವರು ಯುವಕರು ಒಂದೇ ಘಟನೆಯಲ್ಲಿ ಮೃತಪಟ್ಟಿರುವುದು ಎಲ್ಲರನ್ನು ಆಘಾತಕ್ಕೀಡು ಮಾಡಿದೆ.
ಶೆಟ್ಟಿಹಳ್ಳಿ ಚರ್ಚ್ ಮತ್ತು ಹೇಮಾವತಿ ಹಿನ್ನೀರು ಪ್ರದೇಶವು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದರೂ, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸದೆ ನೀರಿಗೆ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ದುರಂತ ಮತ್ತೊಮ್ಮೆ ನೆನಪಿಸಿದೆ. ಸ್ಥಳೀಯರು ಹಾಗೂ ಸಾರ್ವಜನಿಕರು ಜಲಾಶಯಗಳ ಬಳಿ ಅಗತ್ಯ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.